Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/108

This page has been proofread.

ಪ್ರಾಮಾಣಿಕತನ ಎಂಬ ಸೊತ್ತು ಇರುತ್ತದೆ. ಈ ಲಕ್ಷಣಗಳು ಸಹಕಾರದ ದೃಷ್ಟಿಯಿಂದ ಅತ್ಯಮೂಲವಾದವುಗಳಾಗಿದ್ದು, ಸಹಕಾರ ಸಂಘಗಳ ಉನ್ನತಿ, ಅವನತಿಗಳು ಬಹುಮಟ್ಟಿಗೆ ಅವುಗಳ ಭಾವಾಭಾವಗಳನ್ನು ಹೊಂದಿಕೊಂಡಿರುವುದರಿಂದ ಮಂಗಳೂರಿನ ನಮ್ಮ ಕ್ರೈಸ್ತ ಸಮಾಜಿಕರಿಗೆ ಒಂದು ಸಹಕಾರ ಸಂಘವನ್ನು ಸ್ಥಾಪಿಸಬೇಕೆಂಬ ಯೋಚನೆಯು ಬಹುಮಂದಿಯಲ್ಲಿ ಬೇರೂರುವದಾಯಿತು.

ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿಯೊಂದಿಗೆ ಶಿಕ್ಷಣ ಮತ್ತು ಬಾಸೆಲ್ ಮಿಶನ್: 1836ರಲ್ಲಿ ಬಾಸೆಲ್ ಮಿಶನ್ ಮಂಗಳೂರಿನಲ್ಲಿ ಕನ್ನಡ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರೂ ಹೆಣ್ಣು ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ. ಹೆಣ್ಣು ಮಕ್ಕಳನ್ನು ಶಿಕ್ಷಣ ವ್ಯವಸ್ಥೆಯೆಡೆಗೆ ಸೇರಿಸಲು ಮೊದಲು ಹೊಲಿಗೆ ಕೇಂದ್ರಗಳನ್ನು ತೆರೆದು ಕೈಕಸಬನ್ನು ಕಲಿಸುವ ವ್ಯವಸ್ಥೆ ಕಲ್ಪಿಸಿ ಇದಕ್ಕಾಗಿ ಅಕ್ಷರ ಜ್ಞಾನದ ಅವಶ್ಯಕತೆ ತೋರಿಬಂದು ಹೆಣ್ಣು ಮಕ್ಕಳು ಮುಂದೆ ಬಂದುದರಿಂದ 1842ರಲ್ಲಿ ಹೊಲಿಗೆ ತರಬೇತಿ ಮತ್ತು ಪ್ರಾಥಮಿಕ ಶಿಕ್ಷಣ ಒಂದೇ ಸೂರಿನಡಿ ಪ್ರಾರಂಭವಾಗಿ ಹೆಣ್ಣು ಮಕ್ಕಳು ವಿದ್ಯೆ ಕಲಿಯು ವಂತಾಯಿತು. ಅನಾಥ ಹೆಣ್ಣು ಮಕ್ಕಳಿಗಾಗಿ 1856ರಲ್ಲಿ ಬೋರ್ಡಿಂಗ್ ಹೋಮ್ ಸ್ಥಾಪಿಸಲ್ಪಟ್ಟು 1863ರಲ್ಲಿ ಮುಲ್ಕಿಗೆ ಸ್ಥಳಾಂತರಗೊಂಡಿತು. ಈಗಲೂ ಬೋರ್ಡಿಂಗ್ ಹೋಮ್ ನಡೆಯುತ್ತಿದೆ. ಇಲ್ಲಿ ಹೊಲಿಗೆ, ಬೇಸಾಯ, ಕೈಕಸಬುಗಳನ್ನು ಕಲಿಸಲಾಗುತ್ತಿತ್ತು.

ಉಡುಪಿ, ಮಂಗಳೂರು, ಕಾರ್ಕಳ ಹಾಗೂ ಉತ್ತರ ಕರ್ನಾಟಕದಲ್ಲಿ ಬ್ರಾಹ್ಮಣ ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸಲಾಗಿತ್ತು. ಹೆಣ್ಣು ಮಕ್ಕಳ ಶಿಕ್ಷಣ ಮುಂದುವರಿಕೆಯಿಂದ 1900ರಲ್ಲಿ ಪ್ರಾಥಮಿಕ ಶಾಲೆಯಲ್ಲಿ ಸ್ತ್ರೀ ಶಿಕ್ಷಕರು ಸೇರ್ಪಡೆಯಾದರು. 1868ರಲ್ಲಿ ಸ್ಥಾಪನೆಯಾದ ಸರಕಾರಿ ಕಾಲೇಜಿನಲ್ಲಿ 1901ರಿಂದ ಹೆಣ್ಣು ಮಕ್ಕಳು ಪದವಿ ಶಿಕ್ಷಣಕ್ಕೆ ಸೇರುವಂತಾಯಿತು. 1918ರಲ್ಲಿ ಹೆಣ್ಣು ಮಕ್ಕಳ ಕನ್ನಡ ಮೊದಲನೇ ಪುಸ್ತಕವೊಂದು ಪಠ್ಯವಾಗಿತ್ತು. ಇದರಲ್ಲಿ, ಸಂಸಾರ, ಕೈಕಸಬು, ಆರೋಗ್ಯ, ಮುಂತಾದ ವಿಭಾಗಗಳಿದ್ದವು. ಮಂಗಳೂರಿನ ಶಾಂತಿ ದೇವಾಲಯಲ್ಲಿ ನಡುವೆ 'ಮದ‌ರ್ಸ್ ಯೂನಿಯನ್' ಎಂಬ ಸಂಸ್ಥೆಯೊಂದು ಪ್ರಾರಂಭಗೊಂಡು ಮಹಿಳೆಯರ ಸೇವೆ ನಡೆಸುತ್ತಿತ್ತು. ಈ ಕೂಟವು ಇಂಗ್ಲಿಷ್ ಮತ್ತು ಕನ್ನಡ ಶಾಖೆಗಳೆಂಬದಾಗಿ ವಿಭಾಗಿಸಲ್ಪಟ್ಟು ಇಂಗ್ಲಿಷ್ ಶಾಖೆಯು 1923ರಿಂದ ವೈ.ಡಬ್ಲ್ಯೂ.ಸಿ.ಎ. (ಯಂಗ್ ವುಮೆನ್ಸ್ ಕ್ರಿಶ್ಚನ್ ಎಸೋಸಿಯೇಷನ್) ಹೆಸರಿನೊಂದಿಗೆ ಇಂದಿಗೂ ಮುನ್ನಡೆಯುತ್ತಿದೆ. ಮಹಿಳೆಯರ ನಡುವೆ ನಡೆಯುವ ಇವರ ಸೇವೆಯು ತಿಂಗಳ ಒಂದು ವಾರ ಹೊಲಿಗೆ ತರಬೇತಿ ನೀಡುತ್ತಿತ್ತು.

96 {{Right|ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...