ತುಳುನಾಡಿನಲ್ಲಿ ಬಾಸೆಲ್ ಮಿಶನ್
186 ವರ್ಷಗಳ ಹಿಂದೆ ತುಳುನಾಡಿನ ಮಣ್ಣಿಗೆ ಕಾಲಿರಿಸಿದ ಇವಾಂಜಲಿಕಲ್ ಮಿಷನರಿ ಸೊಸ್ಯಾಟಿ (ಬಾಸೆಲ್ ಮಿಷನ್) ಎಂಬ ಸಂಸ್ಥೆಯಿಂದ ಬಂದ ವಿದೇಶಿ ಮಿಶನರಿಗಳು ತುಳು ನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. 1815 ರಲ್ಲಿ ಸ್ವಿಜರ್‌ಲ್ಯಾಂಡ್‌ನ ಬಾಸೆಲ್‌ನಲ್ಲಿ ಸ್ಥಾಪನೆಯಾದ ಸಂಸ್ಥೆಯು ಭಾರತವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಅರಿಸಿಕೊಂಡು 3 ಮಿಶನರಿಗಳ ಮೊದಲ ತಂಡವನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿತು. ಮಿಷನರಿಗಳಾದ ಜೆ.ಸಿ. ಲೆಹ್ನರ್, ಸಿ. ಎಲ್.ಗ್ರೈನರ್ ಮತ್ತು ಸಾಮ್ಯುವೆಲ್ ಹೆಬಿಕ್‌ರವರು 23 ಮಾರ್ಚ್ 1834ರಂದು ಬಾಸೆಲ್‌ನಿಂದ ಹೊರಟು ಇಂಗ್ಲೆಂಡಿಗೆ ಹೋಗಿ ಅಲ್ಲಿಂದ ಜುಲೈ 15ಕ್ಕೆ ಹಡಗಿನಲ್ಲಿ ಹೊರಟು ಸುಮಾರು 7 ತಿಂಗಳುಗಳ ಕಾಲ ಪ್ರಯಾಣ ಮಾಡಿ 30 ಅಕ್ಟೋಬರ್ 1834 ರಂದು ಮಂಗಳೂರಿನ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿ ಈಗಿರುವ ಸೋವರಿನ್ ಟೈಲ್ಸ್ ಪಕ್ಕದಲ್ಲಿ ಆಗ ಇದ್ದ ದಕ್ಕೆಯಲ್ಲಿ (ಆಗ ಇದೇ ಮಂಗಳೂರಿನ ಬಂದರಾಗಿತ್ತು.) ಇಳಿದರು. ಮಂಗಳೂರಿನ ಮೀನುಗಾರಿಕಾ ಬಂದರು ಪರಿಸರದಲ್ಲಿರುವ ನೀರೆಶ್ವಾಲ್ಯ ಎಂಬಲ್ಲಿ ಒಂದು ಮನೆಯಲ್ಲಿ ಬಾಸೆಲ್ ಮಿಷನ್ ತನ್ನ ಕಾರ್ಯಕ್ಷೇತ್ರವನ್ನು ಪ್ರಾರಂಭಿಸಿತು.
ಕ್ರಿಸ್ತನ ಸುವಾರ್ತೆ ಸಾರುವ ಏಕೈಕ ಉದ್ದೇಶದಿಂದ ತುಳುನಾಡಿಗೆ ಆಗಮಿಸಿದ ಮಿಶನರಿಗಳು ಇಲ್ಲಿ ಸುವಾರ್ತೆ ಸಾರುವುದಕ್ಕಿಂತ ಹೆಚ್ಚು ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟಿರುವುದು ಈಗ ಚರಿತ್ರೆಗೆ ಸೇರಿದ ವಿಚಾರಗಳಾಗಿವೆ. ಮುದ್ರಣ, ವೈದ್ಯಕೀಯ ಶಿಕ್ಷಣ, ಪತ್ರಿಕೆ, ಕನ್ನಡ, ತುಳು, ಮಲಯಾಳಂ ಭಾಷಾ ಸಾಹಿತ್ಯ, ಜಾನಪದ ಸಾಹಿತ್ಯ, ಹಂಚು ಉದ್ಯಮ, ನೇಯಿಗೆ, ಕೃಷಿ, ಹೀಗೆ ಎಲ್ಲಾ ಪ್ರಕಾರಗಳಲ್ಲಿ ಸೇವೆ ಮಾಡಿರುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಅದರ ಒಳ್ಳೆಯ ಫಲಗಳನ್ನು ಅನುಭವಿಸುತ್ತಿದ್ದೇವೆ.
1836ರಲ್ಲಿ ಮೊದಲ ಕನ್ನಡ ಪ್ರಾಥಮಿಕ ಶಾಲೆ, 1838ರಲ್ಲಿ ಮೊದಲ ಆಂಗ್ಲ ಮಾಧ್ಯಮ ಶಾಲೆ, 1847ರಲ್ಲಿ ವೈದಿಕ ಶಾಲೆ ಪ್ರಾರಂಭಿಸಿದ ಕೀರ್ತಿ ಇವರದಾದರೆ,