Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/139

This page has not been proofread.

ಪರಿವರ್ತನೆಯನ್ನು ತರಲು ಪ್ರಯತ್ನ ಮಾಡಿದೆ. ವಿದೇಶಿಯರ ಆಳ್ವಿಕೆಯು- ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ವಲಯಗಳಲ್ಲಿ ಭಾರತೀಯರನ್ನು ಬಡಿದೆಬ್ಬಿಸಿದೆ. ಇದರಿಂದ ಬಹುಮಂದಿ ಮತಪರಿವರ್ತನೆ ಹೊಂದಿದರೆಂದರ್ಥವಲ್ಲ. ಆದರೆ ಅನೇಕ ಮಂದಿ ಬುದ್ಧಿಜೀವಿಗಳು ಮತ್ತು ಸುಧಾರಕರು ಹಾಗೂ ಸಂತರು ಸಂಪ್ರದಾಯಸ್ಥ ಹಿಂದೂ ಧರ್ಮಕ್ಕೆ ಹೊಸ ಚೈತನ್ಯ ನೀಡಲು ಹೊಸ ದಿಕ್ಕಿನಲ್ಲಿ ಯೋಚಿಸಿ ಕಾರ್ಯ ತತ್ಪರರಾದರು. ಭಾರತಕ್ಕೆ ಅಗಮಿಸಿದ ಮಿಶನರಿ ಸಂಸ್ಥೆಗಳ ಮೂಲ ಉದ್ದೇಶ ಧರ್ಮ ಪ್ರಚಾರವಾದರೂ ಅದಕ್ಕೆ ಪೂರಕವಾಗಿ ಶಿಕ್ಷಣ, ಉದ್ಯೋಗ, ಕೈಗಾರಿಕೆ ಹಾಗೂ ವೈದ್ಯಕೀಯ ನೆರವು ಮೊದಲಾದ ಜನಹಿತ ಕಾರ್ಯಕ್ರಮಗಳನ್ನು ಕೈಗೊಂಡರು. ಇಂತ ಮಾನವೀಯ ಮೌಲ್ಯಗಳನ್ನೊಳಗೊಂಡ ಕಾರ್ಯಕ್ರಮಗಳು ಭಾರತೀಯ ಬುದ್ಧಿಜೀವಿಗಳ ಮೇಲೆ ಪ್ರಭಾವ ಬೀರತೊಡಗಿದವು. ಪರಿಣಾಮವಾಗಿ ಹಿಂದೂ ಸಮಾಜ ಹಾಗೂ ಧರ್ಮದಲ್ಲಿ ಅರಿವು ಮೂಡತೊಡಗಿತು. ಕ್ರೈಸ್ತರ ಪರೋಪಕಾರಿ ಸೇವೆಯನ್ನು ಮೆಚ್ಚಿ, ಇದರಿಂದ ಎಚ್ಚೆತ್ತ ಬುದ್ಧಿಜೀವಿಗಳು ಹಾಗೂ ಸುಧಾರಕರು ತಮ್ಮ ಧಾರ್ಮಿಕ ಸಾಮಾಜಿಕ ನಂಬಿಕೆಗಳನ್ನು ಸುಧಾರಿಸಿ ಪಾಶ್ಚಾತ್ಯರ ಉದಾರತೆ ಮತ್ತು ಸ್ವತಂತ್ರ ಭಾವನೆಗಳನ್ನು ರೂಢಿಸಿಕೊಳ್ಳಲು ಕರೆಯಿತ್ತರು. ಜೈನ ಆಳ್ವಿಕೆಯ ಪತನದೊಂದಿಗೆ ಬಿಲ್ಲವರ ಅವನತಿಯೂ ಪ್ರಾರಂಭವಾಯಿತು ಎನ್ನಬಹುದು. 15ನೇ ಶತಮಾನದಲ್ಲಿ ವೀರಶೈವ ಅರಸರ ಆಳ್ವಿಕೆಯ ಕಾಲದಲ್ಲಿ ತುಳುನಾಡಿನಲ್ಲಿ ಪುರೋಹಿತಶಾಹಿಗಳ ಪ್ರಾಬಲ್ಯ ಮೆರೆಯಿತು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಬಲರಾಗಿದ್ದ ಅವರು ಅಳರಸರುಗಳ ಕೈಕೆಳಗೆ ದಿವಾನರಾಗಿ, ಶ್ಯಾನುಭೋಗರಾಗಿ ಪ್ರಮುಖ ಹುದ್ದೆಗಳನ್ನು ಆಲಂಕರಿಸಿಕೊಂಡರು. ವ್ಯಾಪಾರ ವ್ಯವಹಾರಗಳನ್ನು ಪ್ರಾರಂಭಿಸಿದರು. ಪರಿಣಾಮವಾಗಿ ಇಲ್ಲಿಯ ಮೂಲ ನಿವಾಸಿಗಳು ತಮ್ಮ ಪ್ರಾಮುಖ್ಯತೆಯನ್ನು ಕಳಕೊಂಡರು. ಆಗ ಜಾತಿಯ ಅಸ್ಪೃಶ್ಯತೆ ಹುಟ್ಟಿಕೊಂಡಿತು. ಬ್ರಿಟಿಷ್ ಆಳ್ವಿಕೆಯ 18ನೇ ಶತಮಾನದ ಕಾಲದಲ್ಲಿ ಪ್ರಥಮವಾಗಿ ಭೂಮಿಯ ದಾಖಲೆಯನ್ನು ಸಿದ್ಧಪಡಿಸುವಾಗ ಶತಮಾನಗಳಿಂದ ಭೂಮಿ ಹುಟ್ಟುವಳಿಗಳನ್ನು ಅನುಭವಿಸಿಕೊಂಡು ಬಂದಿದ್ದ ಬಿಲ್ಲವರನ್ನು ಹಾಗೂ ಇತರ ಹಿಂದುಳಿದ ವರ್ಗದವರನ್ನು ಗೇಣಿದಾರರೆಂದು ದಾಖಲಿಸಲಾಯಿತು. ಮೇಲು ವರ್ಗದವರು ನಿರಾಯಾಸವಾಗಿ ಭೂಮಿಯ ಒಡೆಯರೆನಿಸಿಕೊಂಡು ಗೇಣಿ ವಸೂಲಿ ಮಾಡಲು ತೊಡಗಿದರು. ಕೆಲವೆಡೆ ಬಿಲ್ಲವರ ಅಪಾರ ಸ್ವಯಾರ್ಜಿತ ಭೂಮಿಗಳನ್ನು ದೈವದ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 127