Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/140

This page has been proofread.

ಉಂಬಳಿಯೆಂದೋ ಭೋಗದ ಜಮೀನೆಂದೋ ಉಲ್ಲೇಖಿಸಿ ಕಿತ್ತುಕೊಳ್ಳಲಾಯಿತು. ವೈದಿಕ ಸಂಸ್ಕೃತಿಯು ಆಳವಾಗಿ ಬೇರು ಬಿಡತೊಡಗಿದಂತೆ ಬಿಲ್ಲವರು ಕಡೆಗಣಿಸಲ್ಪಟ್ಟು ಅಸ್ಪಶ್ಯರೆನಿಸಿಕೊಂಡರು. ಇದರ ಪರಿಣಾಮವಾಗಿ 19ನೇ ಶತಮಾನದ ಅವಧಿಯಲ್ಲಿ ಸಾಕಷ್ಟು ಬಿಲ್ಲವರು ಕ್ರೈಸ್ತ ಮತಕ್ಕೆ ಮತ್ತು ಬ್ರಹ್ಮ ಸಮಾಜಕ್ಕೆ ಸೇರಿದರು.

ಕ್ರೈಸ್ತ ಧರ್ಮದ ಬೋಧನೆಯನ್ನು ಆಲಿಸಿದ ಬಿಲ್ಲವರು ತಮ್ಮ ಧರ್ಮವೂ ಸಾಮಾಜಿಕ ಸ್ಥಿತಿಗತಿಗಳೂ ನಿಷ್ಟ್ರಯೋಜಕ. ಅಲ್ಲದೆ ದೇಶಿಯ ಕ್ರೈಸ್ತರ ಜೀವನ ಶೈಲಿಯು ತಮ್ಮದಕ್ಕಿಂತ ಎಷ್ಟೋ ಉತ್ತಮ ಎಂಬುದನ್ನು ಕೆಲವರು ಅರಿತರು. ತಮ್ಮ ಭೂತಗಳು ಭಯ ಹುಟ್ಟಿಸುವಂಥವುಗಳು. ಭೂತಗಳು ಹಾಗೂ ಪೂಜಾರಿಗಳಿಂದ ತೊಂದರೆ ಕಿರುಕುಳದ ಭಾವನೆ, ಕ್ರೈಸ್ತರು ಭೂತಗಳಿಂದ ಬಲಿಷ್ಠರು ಮಾತ್ರವಲ್ಲದೆ ಭೂತಗಳ ಹಿಂಸೆಯಿಂದ ರಕ್ಷಣೆಯನ್ನೊದಗಿಸಲು ಸಮರ್ಥರಿದ್ದಾರೆ ಎಂದು ನಂಬಿದರು. ದೇಶೀಯರು ಕ್ರೈಸ್ತ ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲುವಂತೆ ಕ್ರೈಸ್ತರು ಸಹಾಯ ಮಾಡಿದರು. ಕ್ರೈಸ್ತ ರಕ್ಷಣಾ ಛತ್ರದಡಿಯಲ್ಲಿ ಭೂತಗಳ ಭಯದಿಂದ ಸುರಕ್ಷಿತತೆಯನ್ನು, ಸದೃಢ ಮನಸ್ಸನ್ನು ಮತ ಪರಿವರ್ತನೆ ಹೊಂದಿದವರು ಅನುಭವಿಸಿದರು.

ಸ್ವಂತ ಬೇಸಾಯ, ಗುತ್ತು ಮನೆಗಳು, ಆರಾಧನೆ, ಸಂಸ್ಕೃತಿ, ವೈದ್ಯಕೀಯ ವೃತ್ತಿ ಮುಂತಾದವುಗಳನ್ನು ಹೊಂದಿ ತುಳುನಾಡಿನ ಮೂಲನಿವಾಸಿಗಳಾಗಿ ಸ್ವಂತಿಕೆಯಿಂದ ಬಾಳುತ್ತಿದ್ದ ಬಿಲ್ಲವರು ಬಯಸಿದ್ದು ಸಮಾನತೆ ಅಥವಾ ಸಮಾಜದಲ್ಲಿ ಸ್ಥಾನಮಾನ. ಇವುಗಳನ್ನೆಲ್ಲ ಕಳೆದುಕೊಂಡು ಅಸ್ಪಶ್ಯರೆನಿಸಿಕೊಂಡು ಬಾಳುವುದಕ್ಕಿಂತ ಸಮಾನತೆ ಇರುವ ಧರ್ಮಕ್ಕೆ ಸೇರಲು ಒಲವು ತೋರಿದ ಬಿಲ್ಲವರು 1834ರಿಂದ ಶ್ರೀ ನಾರಾಯಣ ಗುರುಗಳ ಚಳವಳಿ ಬರುವ ತನಕವೂ ಕ್ರೈಸ್ತ ಮತಕ್ಕೆ ಸೇರುತ್ತಿದ್ದ ವಿಚಾರಗಳ ದಾಖಲೆಗಳು ವರದಿಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ.

ಕ್ರೈಸ್ತಧರ್ಮವನ್ನು ಸ್ವೀಕರಿಸಿದ ಬಿಲ್ಲವರು ಸಮಾನತೆ, ಶಿಕ್ಷಣ ಮುಂತಾದವುಗಳನ್ನು ಹೊಂದಿದರೂ ತಮ್ಮ ಜೀವಿತದಲ್ಲಿ ಹಲವಾರು ತೊಂದರೆ ಗಳನ್ನೂ ಅನುಭವಿಸಬೇಕಾಯಿತು. ಗೇಣಿಗೆ ಬೇಸಾಯ ಮಾಡುತ್ತಿದ್ದ ಕ್ರೈಸ್ತರಾದ ಬಿಲ್ಲವರ ಭೂಮಿಗಳನ್ನು ಹಿಂತಿರುಗಿ ಪಡೆಯಲಾಯಿತು. ಒಕ್ಕಲುಗಳನ್ನು ಎಬ್ಬಿಸಿದರು. ಕೆಲಸಗಳನ್ನು ಕಳಕೊಂಡರು. ಇಂತಹ ಸಂದರ್ಭದಲ್ಲಿ ಮಿಶನರಿಗಳು ವಾಸಿಸಲು ಸ್ಥಳ, ಬೇಸಾಯಕ್ಕೆ ಭೂಮಿ, ದುಡಿಯಲು ಉದ್ಯೋಗ ಮುಂತಾದ ಸಹಕಾರವನ್ನು ನೀಡಿ ಸಮಾಜದಲ್ಲಿ ಸಮಾನತೆಯಿಂದ ಜೀವನ ಮಾಡಲು ಅನುಕೂಲ ಕಲ್ಪಿಸಿದರು. ತುಳುನಾಡಿನ ಪಾದೂರು, ಗುಡ್ಡೆ, ಕದಿಕೆ, ಮುಲ್ಕಿ, ಕುತ್ಯಾರ್, ಸಾಂತೂರು, ಉಚ್ಚಿಲ

128

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...