Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/186

This page has been validated.

ಸಾಂತಾ ಕ್ಲಾಸ್- ಕ್ರಿಸ್ಮಸ್ ಫಾದರ್

ದಿನಂಪ್ರತಿ ಜಗತ್ತಿನ ಲಕ್ಷ ಲಕ್ಷ ಹೃದಯಗಳಲ್ಲಿ ಮಾನವಿಯ ಗುಣಗಳನ್ನು ಹುಟ್ಟಿಸಿ ಬೆಳೆಸಿಕೊಂಡು ಸಹಸ್ರಾರು ಸಂವತ್ಸರಗಳಲ್ಲಿ ಕೋಟ್ಯಾಂತರ ಮಾನವರ ಹೃದಯದ ಪರಿವರ್ತನೆಗೆ ಕಾರಣನಾಗಿ ಯೇಸು ಎಂಬ ನಾಮದಿಂದ ಭೂಮಿಗವತರಿಸಿದ ಯೇಸು ಕ್ರಿಸ್ತನ ಹುಟ್ಟು ಹಬ್ಬವನ್ನು ಕ್ರಿಸ್ಮಸ್ ಎಂಬ ಹೆಸರಿನಿಂದ ಡಿಸೆಂಬರ್ 25ನೇ ತಾರೀಕಿನಂದು ಜಗತ್ತಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಕ್ರಿಸ್ಮಸ್ ಎಂಬುದು ಕ್ರೈಸ್ಟ್ ಮಾಸ್ (ಕ್ರಿಸ್ತನಿಗೆ ಸಂಬಂಧಿಸಿದ ಆರಾಧನೆ) ಎಂಬುದರ ಸಂಕ್ಷಿಪ್ತ ರೂಪ. ಕ್ರಿಸ್ತನು ಹುಟ್ಟಿ 2 ಸಾವಿರ ವರ್ಷಗಳಾದರೂ 4ನೇ ಶತಮಾನದಿಂದ ಕ್ರಿಸ್ಮಸ್ ಹಬ್ಬವನ್ನು ಡಿಸೆಂಬರ್ 25ಕ್ಕೆ ಆಚರಿಸಿಕೊಂಡು ಬರಲಾಗುತ್ತಿದೆ. ಕ್ರಿಸ್ಮಸ್ ಆಚರಣೆಯ ಪೂರ್ವ ತಯಾರಿಯು ಡಿಸೆಂಬರ್ ಮೊದಲ ವಾರದಿಂದಲೇ ಆರಂಭವಾಗುತ್ತದೆ. ದೇವಾಲಯಗಳಲ್ಲಿ ಮಕ್ಕಳ ಕಾರ್ಯಕ್ರಮ, ಕ್ಯಾರಲ್ಸ್ ಗಳಿಗಾಗಿ ಸಿದ್ಧತೆ, ಬೇಕರಿಗಳಲ್ಲಿ ಕುಸ್ವಾರ್, ಕೇಕ್ ತಯಾರಿ, ಅಂಗಡಿಗಳಲ್ಲಿ ಗೂಡುದೀಪ, ಅಲಂಕಾರಿಕ ವಸ್ತುಗಳು, ಗೋದಲಿಯ ಗೊಂಬೆಗಳು, ಪಟಾಕಿ, ಮೇಣದ ಬತ್ತಿ, ಬಣ್ಣ ಬಣ್ಣದ ಲೈಟಿಂಗ್ಸ್‌ಗಳು, ಶುಭಾಶಯ ಪತ್ರ ಇವುಗಳು ಮಾರಾಟಕ್ಕೆ ಸಿದ್ಧವಾಗುತ್ತದೆ. ಮಕ್ಕಳೆಲ್ಲರಿಗೆ ಈ ತಿಂಗಳು ಬಂತೆಂದರೆ ಎಲ್ಲಿಲ್ಲದ ಸಂತಸ, ತಂದೆ ತಾಯಂದಿರು ತಮಗೆ ನೀಡಲಿರುವ ಉಡುಗೊರೆ, ಹೊಲಿಸಲಿರುವ ಹೊಸ ಬಣ್ಣ ಬಣ್ಣದ ಬಟ್ಟೆಗಳು, ರುಚಿ ರುಚಿಯ ತಿಂಡಿ ಇದಕ್ಕಾಗಿ ಎದುರು ನೋಡುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಜಗತ್ತಿನಾದ್ಯಂತ ಆಚರಿಸಲ್ಪಡುವ ಹಬ್ಬವಾದ್ದರಿಂದ ಇದನ್ನು ಬಹು ಗಂಭೀರವಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ಆಚರಣೆಯಲ್ಲಿ ನಮ್ಮ ನೆನಪಿನಂಗಳದಲ್ಲಿ ಮೂಡಿ ಬರುವುದು ಕ್ರಿಸ್ಮಸ್ ತಾತ ಅಥವಾ ಕ್ರಿಸ್ಮಸ್ ಫಾದರ್- ಯಾರು ಕ್ರಿಸ್ಮಸ್ ತಾತ ?. ಈತನನ್ನೇಕೆ ವರ್ಷವೂ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಜ್ಞಾಪಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಕೊಳ್ಳುವುದೇ ಈ ಲೇಖನ.

174

ತುಳುನಾಡಿನಲ್ಲಿ ಬಾಸೆಲ್‌ ಮಿಶನ್‌ ಮತ್ತಿತರ ಲೇಖನಗಳು...