Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/73

This page has been proofread.

5. ಅನ್ಯರ ನಡೆಗಳು:- ಯೀ ಕಾಗದದಲ್ಲಿ ಸ್ಥಳ ಸಿಕ್ಕಿದರೆ ಬೇರೆ ದೇಶಗಳಲ್ಲಿ ನಡವಡಿಕೆಯಾದ ರಾಜನೀತಿ ಗ್ರಹನೇಮ ಮೊದಲಾದವುಗಳನ್ನು ವಿವರಿಸುವುದು. ಯಾಕಂದರೆ ಬೇರೆ ಬೇರೆ ಜನರ ಮಾರ್ಗಗಳು ಅರಿತಿರುವುದರಿಂದ ಅವರ ಕಾರ್ಯಗಳನ್ನು ತಿಳುಕೊಳ್ಳಲಿಕ್ಕೆ ಬುದ್ದಿಯು ಹುಟ್ಟುವುದು.

6. ಸುಬುದ್ಧಿಗಳು:- ಬೇರೆ ಬೇರೆ ದೇಶಗಳ ಗಾದೆಗಳನ್ನು ಬೇರೆ ಬೇರೆ ಸಕಾಲಗಳಲ್ಲಿ ಬೇರೆ ಬೇರೆ ಜನರೊಳಗೆ ಪ್ರಸಿದ್ಧಿಯಾದ ಉತ್ತಮ ಬುದ್ಧಿಯ ಮಾತುಗಳನ್ನು ಯುಕ್ತ ಕಂಡ ಹಾಗೆ ಬರೆಯಲಿಕ್ಕೆ ನಿರ್ಣಯಿಸಿಯದೆ.

7. ಕಥೆಗಳು:- ಪಂಚತಂತ್ರ ಮೊದಲಾದ ಬೇರೆ ಬೇರೆ ದೇಶಸ್ಥರ ಪರಂಪರೆಯಾದ ಕಥೆಗಳಲ್ಲಿ ವೊಂದುಂದು ಬಾಲ ವೃದ್ಧ ಮೊದಲಾದವರ ಸಂತೋಷಕ್ಕಾಗಿ ರೂಢಿ ಭಾಷೆ ಹೇಳುವುದು ಆದೀತು.

8. ಯಾರಾದರೂ ವೊಂದು ವರ್ತಮಾನ ಅಥವಾ ಒಂದು ಮಾತು ಇದರಲ್ಲಿ ಸೇರಿಸಿ ಛಾಪಿಸಬೇಕೆಂತಾ ಬರದು ಕಳುಹಿಸಿದರೆ ಆ ಸಂಗತಿಯ ಸತ್ಯವಾಗಿದ್ದರೆ ಅದು ಸಹಾ ಈ ವರ್ತಮಾನ ಕಾಗದ ಸಂಗಡ ಕೂಡಿಸಿ ಛಾಪಿಸ ಬಹುದಾಗಿರುತ್ತದೆ.

ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಯಿಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮಾರ್ಯಾದೆಗಳನ್ನು ತಿಳಿಯದೇ ಕಿಟಕಿಯಿಲ್ಲದ ಬಿಡಾರದಲ್ಲಿ ವುಳಕೊಳ್ಳುವವರ ಹಾಗೆ ಇರುತ್ತಾ ಬಂದರು. ಆದಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀಳುವ ಹಾಗೆಯೂ ನಾಲ್ಕು ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆ ವೊಂದು ಸಾರಿ ಸಿದ್ದ ಮಾಡಿ ಅದನ್ನು ವೋದಬೇಕೆಂದಿರುವವರೆಲ್ಲರಿಗೆ ಕೊಟ್ಟರೆ ಕಿಟಕಿಗಳನ್ನು ಮಾಡಿದ ಹಾಗಾಗಿರುವದು ಈ ಕಾಗದವನ್ನು ಬರೆಯುವವರಿಗೂ ವೋದುವವರಿಗೂ ದೇವರು ಬುದ್ಧಿಯನ್ನು ಕೊಡಲಿ, ಇಂಥಾ ಸಮಾಚಾರ ಕಾಗದವನ್ನು ಬರಿಯುವವನು ವೋದುವವರೆಲ್ಲರಿಗೆ ಸಂತೋಷ ಪಡಿಸುವ ಹಾಗೆ ಬರಿಯಬೇಕೆಂದು ಮನಸು ಮಾಡುವನು. ಆದರೂ ಕೆಲವರು ಅಂಗೀಕರಿಸಿಯೂ ಕೆಲವರು ತಿರಸ್ಕರಿಸಿದರೆ ಆ ವಿಶಯಕ್ಕೆ ಆಧಾರಕ್ಕಾಗಿ ಪುರಂದರ ದಾಸರು ಮಾಡಿದ ಪದಗಳಲ್ಲಿ ವೊಂದು ಸಹಾ ಸರಿಯಾಗಿ ಹೇಳಲ್ಪಡುತ್ತದೆ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು 61